ಕಾರ್ಮಿಕರಿಗೆ ವೇತನ ನೀಡಲು ಒತ್ತಾಯಿಸಿ ಮನವಿ
ಹರಪನಹಳ್ಳಿ: ಅರಸೀಕೆರೆ ಸಮುದಾಯ ಹಾಗೂ ಪ್ರಾಥಮಿಕ ಆಸ್ಪತ್ರೆ ಸೇರಿದಂತೆ ತಾಲೂಕಿನಾದ್ಯಂತ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚು ಕಾರ್ಮಿಕರಿಗೆ 9 ತಿಂಗಳಿOದ ವೇತನ ನೀಡದಿರುವ ಏಜೆನ್ಸಿ ಕೂಡಲೇ ವೇತನ ನೀಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ವತಿಯಿಂದ ಅರಸೀಕೆರೆ ವೈದ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಗುತ್ತಿಗೆ ಕಾರ್ಮಿಕರ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೆ ನಿಗದಿತ ಅವಧಿ ಮುಗಿಯುವ ಮೊದಲು ಅಗತ್ಯವಿರುವ ವೇತನವನ್ನು ಪಾವತಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ಬದುಕು ಅನೇಕ ಸವಾಲುಗಳಿಂದ ಕೂಡಿದೆ. ಸರಿಯಾದ ವೇತನ, ಸಾಮಾಜಿಕ ಭದ್ರತೆ, ಮತ್ತು ಕೆಲಸದ ಪರಿಸ್ಥಿತಿಗಳು ಅನೇಕ ಬಾರಿ ಅವರ ನಿರೀಕ್ಷೆಗಳನ್ನು ಪೂರೈಸುವುದಿಲ್ಲ. ಖಾಯಂ ನೌಕರರಿಗೆ ಹೋಲಿಸಿದರೆ ಕಡಿಮೆ ಸೌಲಭ್ಯಗಳು ಇವುಗಳನ್ನು ಎದುರಿಸುತ್ತಿದ್ದಾರೆ. ಮತ್ತು ಕಾಲಕಾಲಕ್ಕೆ ವೇತನ ಪಾವತಿ ಮಾಡದೇ ಇರುವುದರಿಂದ ಕಾರ್ಮಿಕರ ಕುಟುಂಬ ನಡೆಸಲು ತುಂಬಾ ಕಷ್ಟಕರವಾಗಿದೆ ಎಂದರು.
ಸುರಕ್ಷಿತವಲ್ಲದ ಕೆಲಸದ ಸ್ಥಳಗಳು ದೀರ್ಘಾವಧಿ ಕೆಲಸದ ಮತ್ತು ಅನಾರೋಗ್ಯಕರ ಸಮಯದಲ್ಲಿ ಕೆಲಸ ಮಾಡಿ ಸರಿಯಾದ ಸಮಯಕ್ಕೆ ವೇತನ ನೀಡದೆ ಇರುವುದರಿಂದ ಕಾರ್ಮಿಕ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಮಾಡದಿರುವುದು ಆತಂಕವಾಗಿದೆ. ಕೂಡಲೇ ಬಾಕಿ ವೇತನವನ್ನು ಪಾವತಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಒದಗಿಸಿ ಕೊಡಬೇಕು. ಕೂಡಲೇ ವೇತನವನನ್ನು ಪಾವತಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಐಟಿಯುಸಿ ರಾಜ್ಯ ಸಮಿತಿಯ ಸದ್ಯಸರಾದ ಗುಡಿಹಳ್ಳಿ ಹಾಲೇಶ್, ತಾಲೂಕು ಕಾರ್ಯದರ್ಶಿ ಯರಬಳ್ಳಿ ಅಭಿಷೇಕ್, ಅರಸೀಕೆರೆ ಮಲ್ಲಿಕಾರ್ಜುನ, ಕಸವನಹಳ್ಳಿ ಹನುಮಂತ, ಮಹೇಶ್ ಅರಸೀಕೆರೆ, ಪಕ್ಕೀರಮ್ಮ, ಕಮಲಮ್ಮ, ನಿಂಗಪ್ಪ ಮತ್ತಿತರರಿದ್ದರು.