ಹರ ಮುನಿದರೆ ಗುರು ಕಾಯುವನು !
ಆತ್ಮೀಯರೇ..
ಕಳೆದ ಒಂದು ವರ್ಷದಿಂದ ‘ಚಳುವಳಿ ನ್ಯೂಸ್’ ನಿರಂತರವಾಗಿ ಪ್ರಕಟವಾಗುತ್ತಿರಲಿಲ್ಲ. ಇದಕ್ಕೆ ನೂರೆಂಟು ಕಾರಣಗಳಿವೆ. ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಲಿದ್ದೇನೆ. ಪ್ರತಿಯೊಬ್ಬರದ್ದು ಒಂದೇ ಪ್ರಶ್ನೆ, ‘ಏಕೆ ಸುದ್ದಿ ಹಾಕುತ್ತಿಲ್ಲ, ಯಾವಾಗ ಪ್ರಾರಂಭ ಮಾಡುತ್ತೀರಿ’ ಎಂದು ಪ್ರಶ್ನೆ ಮಾಡುತ್ತಿದ್ದರು. ‘ಒಂದಿಷ್ಟು ಸಮಯ ಬೇಕಿದೆ’ ಎನ್ನುವ ಉತ್ತರ ಮಾತ್ರ ನನ್ನಲ್ಲಿತ್ತು. ಅವರೆಲ್ಲರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಇದೀಗ ‘ಚಳುವಳಿ ನ್ಯೂಸ್’ ಪುನರಾರಂಭವಾಗುತ್ತಿದೆ.
ನನ್ನ ಸಾರಥ್ಯದಲ್ಲಿ ಆರಂಭಗೊoಡು ಜನಪ್ರಿಯ ಆನ್‌ಲೈನ್ ಮಾಧ್ಯಮವಾಗಿದ್ದ ‘ಚಳುವಳಿ ನ್ಯೂಸ್’ ಇದೀಗ ತನ್ನ ಹೊಸ ರೂಪದಲ್ಲಿ ಮರು ಪ್ರಾರಂಭಗೊoಡಿದೆ. ಮಾಧ್ಯಮ ಜಗತ್ತಿನಲ್ಲಿ ಸಾಮಾಜಿಕ ನ್ಯಾಯ, ಜನಪಕ್ಷೀಯ ಬರವಣಿಗೆ ಹಾಗೂ ನಿಷ್ಪಕ್ಷಪಾತ ವರದಿ ಶೈಲಿಗೆ ಹೆಸರಾಗಿದ್ದ ಈ ನ್ಯೂಸ್ ಪೋರ್ಟಲ್ ಈಗ ಇನ್ನಷ್ಟು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಪ್ರೇಕ್ಷಕರಿಗೆ ಮುಕ್ತವಾಗಿದೆ.
‘ಚಳುವಳಿ ನ್ಯೂಸ್’ ಹೊಸ ತಂತ್ರಜ್ಞಾನ ಹಾಗೂ ಪ್ರಾಮಾಣಿಕ ಪತ್ರಿಕೋದ್ಯಮದೊಂದಿಗೆ ಸಾಮಾಜಿಕ ಚಿಂತನೆಗಳಿಗೆ ವಾಚಾಲಯವಾಗಲಿದೆ. ಈ ಹೊಸ ಆವೃತ್ತಿಯು ಹಲವು ವಿಭಾಗಗಳನ್ನು ಹೊಂದಿದ್ದು–ರಾಜಕೀಯ, ಕೃಷಿ, ಶಿಕ್ಷಣ, ಪರಿಸರ, ಮಹಿಳಾ ಹಕ್ಕುಗಳು ಹಾಗೂ ಸಾಮಾಜಿಕ ಚಳವಳಿಗಳ ಕುರಿತ ವಿಶ್ಲೇಷಣೆಗಳಿಗೆ ಮುಖ್ಯ ತಾಣವಾಗಲಿದೆ. ಜೊತೆಗೆ ನೇರ ಸುದ್ದಿಗಳು, ವಿಡಿಯೋ ಪ್ಯಾನಲ್ಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಂವಾದಗಳನ್ನೂ ಒಳಗೊಂಡಿದೆ.
ಜೊತೆಗೆ ವಿದೇಶ, ದೇಶ, ರಾಜ್ಯ ಸುದ್ದಿ, ಅಂತರ್ ಜಿಲ್ಲಾ ಸುದ್ದಿ, ಜಿಲ್ಲಾ ಸುದ್ದಿ, ತಾಲ್ಲೂಕು ಸುದ್ದಿ, ಕ್ರೈಂ ನ್ಯೂಸ್, ಬ್ರೇಕಿಂಗ್ ನ್ಯೂಸ್, ಸಂಪಾದಕೀಯ, ಚಳುವಳಿ ಸ್ಪೆಷಲ್, ಗುಡ್ ಸ್ಟೋರಿ, ಸಂದರ್ಶನಗಳು, ಮೈ ಲೈಫ್-ಮೈ ಸ್ಟೋರಿ, ಅಧ್ಯಾತ್ಮಿಕ, ಸಿನಿಮಾ ಸುದ್ದಿ, ಪೊಲಿಟಿಕಲ್ ಬ್ರೇಕಿಂಗ್, ಮಹಿಳಾ ಅಂಕಣ, ಕವನ ಸೇರಿದಂತೆ ಅನೇಕ ಅಂಕಣಗಳ ಹೂರಣವಾಗಿದೆ.
ಮುಂದಿನ ದಿನಗಳಲ್ಲಿ ‘ಚಳುವಳಿ ನ್ಯೂಸ್’ ನಿರಂತರವಾಗಿರಲಿದ್ದು, ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತ ಒಂದಿಷ್ಟು ಜನ ಸ್ನೇಹಿತರು, ಹಿತೈಷಿಗಳ ಬಗ್ಗೆ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಜೀವನದಲ್ಲಿ ಸಮಸ್ಯೆಗಳು ನಿಜವಾದ ಗುರು. ಅವು ಬದುಕಿಗೆ ಪಾಠವನ್ನು ಹೇಳಿ ಕೊಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಇಂತಹ ನೂರಾರು ಪಾಠಗಳನ್ನು ಕಲಿತಿದ್ದೇನೆ. ಆದರೆ ‘ಹರ ಮುನಿದರೆ ಗುರು ಕಾಯುವನು’ ಎನ್ನುವ ಮಾತು ನನ್ನ ಬದುಕಿನಲ್ಲಿ ಸತ್ಯವಾಗಿದೆ.
ಗುರುಗಳ ಕಾರುಣ್ಯದೊಂದಿಗೆ ಇನ್ಮುಂದೆ ‘ಚಳುವಳಿ’ ನಿರಂತರವಾಗಲಿದೆ. ಎಂದಿನoತೆ ತಮ್ಮೆಲ್ಲರ ಸಲಹೆ, ಸಹಕಾರ ನಿರಂತರವಾಗಿರಲಿ.
-ಎಸ್.ಎನ್.ಕುಮಾರ್ ಪುಣಬಗಟ್ಟಿ, ಸಂಪಾದಕ
